ದಾಸವಾಳ
ಮಾಲ್ವೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಅಲಂಕಾರ ಸಸ್ಯ (ಹೈಬಿಸ್ಕಸ್). ಇದರಲ್ಲಿ 200ಕ್ಕೂ ಹೆಚ್ಚಿನ ಪ್ರಭೇದಗಳುಂಟು.
ಸಾಮಾನ್ಯವಾಗಿ ಎಲ್ಲ ಪ್ರಭೇದಗಳೂ ಪೊದೆ ಸಸ್ಯಗಳು. ಇದರ ಕಾಂಡ ಗಟ್ಟಿ. ಎಲೆಗಳು ಸರಳ ರೀತಿಯವು. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಬಣ್ಣ ಮಿರುಗುವ ಹಸಿರು. ಎಲೆಗಳ ಅಲಗು ಭಾಗ ಅಗಲವಾದುದೂ ಅಂಡಾಕಾರದ್ದೂ ಆಗಿದ್ದು ತುದಿಯಲ್ಲಿ ಈಟಿಯಂತೆ ಮೊನಚಾಗಿದೆ. ಕೆಲವು ಬಗೆಗಳಲ್ಲಿ ಎಲೆಯ ಅಂಚು ಹಲ್ಲುಗಳಂತೆ ಸೀಳಿದೆ. ಹೂಗಳು ಒಂಟೊಂಟಿಯಾಗಿ ಎಲೆಗಳ ಕಂಕುಳಲ್ಲಿ ಅಥವಾ ರೆಂಬೆಗಳ ತುದಿಗಳಲ್ಲಿ ಅರಳುವುವು. ಹೂಗಳ ಗಾತ್ರ ಸಾಮಾನ್ಯವಾಗಿ ದೊಡ್ಡದು. ಹೂಗಳಲ್ಲಿ ಬಿಡಿ ಹಾಗೂ ಜೋಡಿ ದಳಗಳುಂಟು. ಇವುಗಳ ಬಣ್ಣ ಮತ್ತು ಆಕಾರ ವೈವಿಧ್ಯಮಯ. ಹೂಗಳು ದ್ವಿಲಿಂಗಿಗಳು; ಒಂದೊಂದರಲ್ಲೂ 5 ಪುಷ್ಪಪತ್ರಗಳಿಂದ ಕೂಡಿದ ಪುಷ್ಪಪಾತ್ರೆ, 5 ದಳಗಳಿಂದ ಕೂಡಿದ ದಳಸಮೂಹ, ಅಂಡಕೋಶವನ್ನು ಸುತ್ತುವರಿದಂತಿರುವ ಕೇಸರ ನಳಿಕೆ, 5 ಕಾರ್ಪೆಲುಗಳಿಂದ ಕೂಡಿದ ಅಂಡಾಶಯ ಉಂಟು. ಪುಷ್ಪಪಾತ್ರೆಯ ಕೆಳಗೆ 8-10 ಹಾಲೆಗಳಿಂದ ರಚಿತವಾದ ಉಪಪುಷ್ಪಪಾತ್ರೆ (ಎಪಿಕೇಲಿಕ್ಸ್) ಇದೆ. ಕೆಲವು ಬಗೆಗಳಲ್ಲಿ ದಳಗಳ ಸಂಖ್ಯೆ ಐದಕ್ಕಿಂತ ಹೆಚ್ಚಾಗಿರುವುದೂ ಉಂಟು. ಇಂಥ ಬಗೆಗಳಲ್ಲಿ ದಳಗಳು ಎರಡು ಸುತ್ತಿನಲ್ಲಿ ಜೋಡಣೆಗೊಂಡಿರುವುವು. ಕೇಸರ ನಳಿಕೆಯ ಮೇಲ್ತುದಿಯಲ್ಲಿ ಅನೇಕ ಕೇಸರಗಳನ್ನು ಕಾಣಬಹುದು. ಕೇಸರ ನಳಿಕೆಯ ತುದಿಯಿಂದ ಶಲಾಕಾಗ್ರ ಹೊರಚಾಚಿರುವುದು. ಇದರಲ್ಲಿ ಐದು ಕವಲುಗಳನ್ನು ಗುರುತಿಸಬಹುದು. ಅಂಡಕೋಶ ಉಚ್ಚಸ್ಥಾನದ್ದು. ಅನೇಕ ಅಂಡಕಗಳನ್ನು ಒಳಗೊಂಡಿದೆ. ಫಲ ಸಂಪುಟ (ಕ್ಯಾಪ್ಸೂಲ್) ಮಾದರಿಯದು.

ದಾಸವಾಳ ಹೆಚ್ಚಾಗಿ ಪ್ರಪಂಚದ ಉಷ್ಣವಲಯ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಸಾಮಾನ್ಯವಾಗಿ ಎಲ್ಲ ತರದ ಮಣ್ಣಿನಲ್ಲಿ ಬೆಳೆಯುತ್ತದಾದರೂ ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಇದರ ಬೆಳವಣಿಗೆ ಹೆಚ್ಚು ಹುಲುಸು.

ದಾಸವಾಳವನ್ನು ಲಿಂಗರೀತಿ ಮತ್ತು ನಿರ್ಲಿಂಗ ರೀತಿಗಳೆರಡರಲ್ಲೂ ಅಭಿವೃದ್ಧಿ ಪಡಿಸಬಹುದು. ಆದರೆ ಲಿಂಗರೀತಿಯಲ್ಲಿ ಅಂದರೆ ಬೀಜದಿಂದ ವೃದ್ಧಿಸುವುದು ಅತಿ ವಿರಳ.

ನಿರ್ಲಿಂಗ ರೀತಿಯ ಅಭಿವೃದ್ಧಿಯನ್ನು ಕಾಂಡ ಕಡ್ಡಿಗಳಿಂದ, ಲೇಯರ್, ಗೂಟಿಗಳಿಂದ ಮಾಡಬಹುದು. ಇಂಥ ಸಸಿಗಳಿಗೆ ತಾಯಿ ಗಿಡದ ಗುಣಗಳೇ ಇರುತ್ತವೆ. ಹೀಗೆ ಅಭಿವೃದ್ಧಿ ಪಡಿಸಿದ ಸಸಿಗಳಲ್ಲಿ ರೋಗರುಜಿನನ್ನು ತಡೆಯುವ ಶಕ್ತಿ ಹೆಚ್ಚಾಗಿದೆ.
ಕಸಿ ಕಟ್ಟುವುದು ಮತ್ತು ಕಣ್ಣು ಹಾಕುವಿಕೆಯಿಂದಲೂ, ನಿರ್ಲಿಂಗ ರೀತಿಯಲ್ಲಿ ಸಸಿಗಳನ್ನು ವೃದ್ಧಿಸಬಹುದು. ಇಂಥವುಗಳಿಂದ ಬಣ್ಣ, ಆಕಾರಗಳಲ್ಲಿ ಹೊಸತನವನ್ನು ತೋರುವ ಗಿಡಗಳನ್ನು ಪಡೆಯಬಹುದು.

ಲಿಂಗರೀತಿಯ ವಂಶಾಭಿವೃದ್ಧಿ ಕ್ರಮದಲ್ಲಿ ಬೀಜಗಳನ್ನು ಸೀಡ್ ಪ್ಯಾನ್‍ನಲ್ಲಿ ಬಿತ್ತಲಾಗುತ್ತದೆ. ಒಂದು ತಿಂಗಳಲ್ಲೇ ಮೊಳಕೆ ಬರುತ್ತದೆ. 3 ತಿಂಗಳ ಅನಂತರ ಸಸಿಯನ್ನು 6 ವ್ಯಾಸದ ಕುಂಡಕ್ಕೆ ಬದಲಾಯಿಸಲಾಗುವುದು. ಸಸಿ 1'-1.1/2' ಎತ್ತರ ಬೆಳೆದಾಗ 3ರಿಂದ 4 ಜೊತೆ ಎಲೆಗಳಿರುತ್ತವೆ. ಸಸಿಯ ತುದಿಯ ಕುಡಿಯನ್ನು ಚಿವುಟಿಹಾಕಿ ಪಕ್ಕದಲ್ಲಿ ಕವಲು ರೆಂಬೆಗಳು ಬೆಳೆಯುವಂತೆ ಮಾಡಲಾಗುತ್ತದೆ. ಸಸಿಗೆ ಒಂದು ವರ್ಷ ವಯಸ್ಸಾದ ಅನಂತರ 9 ಕುಂಡಗಳಿಗೆ ಬದಲಾಯಿಸಲಾಗುತ್ತದೆ, ಇಲ್ಲವೇ ನೆಲಕ್ಕೆ ಹಾಕಲಾಗುತ್ತದೆ.

ಗೂಟಿಯನ್ನು ಕಟ್ಟಲು ಜರಡಿಯಾಡಿಸಿ ಶುಚಿಗೊಳಿಸಿದ ಎಲೆಗೊಬ್ಬರ ಮತ್ತು ಸಣ್ಣ ಮರಳಿನ ಮಿಶ್ರಣವನ್ನು ಬಳಸಲಾಗುವುದು. ಬೆಳೆಯುವ ಕಾಂಡದ ಹೊರ ತೊಗಟೆಯನ್ನು ಪಟ್ಟಿಯ ರೂಪದಲ್ಲಿ ಕತ್ತರಿಸಿ ತೆಗೆದು ಗೊಬ್ಬರ ಮಿಶ್ರಣವನ್ನು ಪಾಲಿತೀನ್ ಹಾಳೆಯಲ್ಲಿ ಹಾಕಿ ಗಾಳಿಯಾಡದಂತೆ ಕುಂಡದ ಸುತ್ತ ಬಿಗಿಯಾಗಿ ಕಟ್ಟಲಾಗುತ್ತದೆ. ಗೂಟಿ ಕಟ್ಟಿದ 1/4-1.1/2 ತಿಂಗಳಲ್ಲಿ ಕಾಂಡದ ಆ ಭಾಗದಲ್ಲಿ ಬೇರು ಹುಟ್ಟುತ್ತದೆ. ಅನಂತರ ಇಂಥ ಗೂಟಿ ಸಸಿಗಳನ್ನು ಕತ್ತರಿಸಿ ತೆಗೆದು ಕುಂಡಗಳಲ್ಲಾಗಲಿ ಭೂಮಿಯಲ್ಲಾಗಲಿ ನೆಡಲಾಗುತ್ತದೆ. ಹದವರಿತು ನೀರು ಹಾಕುತ್ತ ಬೆಳೆಸಲಾಗುತ್ತದೆ. 4-5 ಕಣ್ಣುಗಳಿಂದ ಕೂಡಿರುವ 3-4'' ಉದ್ದದ ಎಲೆಗಳಿಂದ ಕೂಡಿರುವ ಕಡ್ಡಿಗಳನ್ನು ತೆಗೆದುಕೊಂಡು ಮರಳು ತುಂಬಿದ ಪೆಟ್ಟಿಗೆ ಅಥವಾ ಸೀಡ್ ಪ್ಯಾನ್‍ಗಳಲ್ಲಿ ನೆಟ್ಟು ನೆರಳಿನಲ್ಲಿಟ್ಟು ಪ್ರತಿದಿನ 3-4 ಸಲ ನೀರನ್ನು ಸಿಂಪಡಿಸುತ್ತಿದ್ದರೆ ಕೇವಲ 35-40 ದಿನಗಳಲ್ಲಿ ಬೇರು ಬರುತ್ತದೆ. ಹಾರ್ಮೋನುಗಳನ್ನು ಉಪಯೋಗಿಸಿದರೆ ಇನ್ನೂ ಬೇಗ (20-25 ದಿನಗಳಲ್ಲಿ) ಬೇರು ಬರುವುದುಂಟು.

ದಾಸವಾಳದ ತಳಿಗಳನ್ನು ತೋಟಗಾರಿಕೆ ದೃಷ್ಟಿಯಿಂದ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ವಾರ್ಷಿಕ, ಬಹುವಾರ್ಷಿಕ, ಹಾರ್ಡಿಶ್ರಬ್ಸ್ ಮತ್ತು ಗ್ಲಾಸ್ ಹೌಸ್ ಶ್ರಬ್ಸ್.

ಹೈಬಿಸ್ಕಸ್ ರೋಸ್ ಸೈನೆನ್ಸಿಸ್, ಹೈಬಿಸ್ಕಸ್ ಸ್ಕೈಜೋಪೆಟಾಲಸ್, ಹೈಬಿಸ್ಕಸ್ ಸಿರಿಕಸ್ ಎಂಬುವು ಬಹಳ ಹಿಂದಿನಿಂದ ಕೃಷಿಯಲ್ಲಿರುವ ಪ್ರಭೇದಗಳು.

ದಾಸವಾಳ ಹವಾಯ್ ದೇಶದ ರಾಷ್ಟ್ರೀಯ ಹೂವು, ಹವಾಯ್‍ನಿಂದ ವಿಶೇಷ ತಳಿಗಳನ್ನು 1961-62ರಲ್ಲಿ ಹಾಗೂ 1964ರಲ್ಲಿ ಬೆಂಗಳೂರಿನ ಲಾಲ್‍ಬಾಗಿಗೆ ತರಿಸಿಕೊಂಡು 1200ಕ್ಕೂ ಹೆಚ್ಚಿನ ಬೀಜದ ಸಸಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ.
ಹವಾಯ್ ತಳಿಗಳ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಗೊಬ್ಬರ ಹಾಕುವಿಕೆ, ಕಸಿ ಕಟ್ಟುವಿಕೆ, ಹಾರ್ಮೋನ್ ಬಳಕೆ ಮುಂತಾದ ಅನೇಕ ಬಗೆಯ ಉಪಚಾರ ಅವಶ್ಯಕ.

ದಾಸವಾಳವನ್ನು ಮುಖ್ಯವಾಗಿ ಅಲಂಕಾರಕ್ಕಾಗಿ ಬಣ್ಣಬಣ್ಣದ ಹೂವುಗಳಾಗಿ ಉದ್ಯಾನವನಗಳಲ್ಲಿ ಬೆಳೆಸುತ್ತಿದ್ದರೂ ಇದಕ್ಕೆ ಉತ್ತಮ ಔಷಧೀಯ ಗುಣಗಳೂ ಉಂಟು. ಹೂಗಳನ್ನು ತುಪ್ಪದಲ್ಲಿ ಹುರಿದು ಅತಿ ಋತುಸ್ರಾವ ಕಾಯಿಲೆಯಿರುವವರಿಗೆ ತಿನ್ನಿಸುವುದಿದೆ. ಇದರ ದಳಗಳನ್ನು ತಿಂದರೆ ಮೂತ್ರ ಸಂಬಂಧಿ ಕಾಯಿಲೆಯೂ ವಾಸಿಯಾಗುವುದೆಂದು ಹೇಳಲಾಗಿದೆ. ಜ್ವರ ಮತ್ತು ಕೆಮ್ಮುಗಳ ನಿವಾರಣೆಗೆ ಇದರ ದಳಗಳ ಮತ್ತು ಬೇರಿನ ಕಷಾಯ ಮಾಡಿ ಕುಡಿಸುವುದುಂಟು ಹಾಲು ಮತ್ತು ಸಕ್ಕರೆಯ ಜೊತೆಗೆ ಬಿಳಿ ದಾಸವಾಳದ ದಳಗಳ ಅಥವಾ ಬೇರಿನ ರಸವನ್ನು ಸೇರಿಸಿ ಕುಡಿಯುವುದರಿಂದ ಮೇಹ ರೋಗಗಳು ವಾಸಿಯಾಗುವುವೆಂದು ಹೇಳಲಾಗಿದೆ. ಇದರ ಬೇರಿನ ಪುಡಿಯ ಜೊತೆಗೆ ಅದೇ ಪ್ರಮಾಣದ ಕಮಲದ ಬೇರಿನ ಪುಡಿಯನ್ನು ಸೇರಿಸಿ 1-1.1/2 ಡ್ರಾಂ ಗಳಷ್ಟನ್ನು ಪ್ರತಿನಿತ್ಯ ತೆಗೆದುಕೊಂಡರೆ ಋತು ಸಂಬಂಧದ ಕಾಯಿಲೆಗಳಿಗೆ ಉತ್ತಮ ಪರಿಹಾರ ದೊರೆಯುವುದು. ದಳಗಳ ರಸ ಮತ್ತು ಆಲಿವ್ ಎಣ್ಣೆಯನ್ನು ಸಮಪ್ರಮಾಣದಲ್ಲಿ ಸೇರಿಸಿ ಅದರಲ್ಲಿನ ನೀರು ಆವಿಯಾಗುವವರೆಗೂ ಕಾಯಿಸಿ ತಯಾರಿಸಿದ ಎಣ್ಣೆ ಕೂದಲಿನ ಬೆಳೆವಣಿಗೆಗೆ ಉತ್ತಮ ಔಷಧಿಯೆನಿಸಿದೆ. ಚೀನದಲ್ಲಿ ದಳಗಳಿಂದ ತಯಾರಿಸಿದ ಕಪ್ಪುಬಣ್ಣವನ್ನು ತಲೆ ಕೂದಲಿಗೆ ಹಚ್ಚಿಕೊಳ್ಳುವುದುಂಟು. ಷೂ ಪಾಲಿಷ್ ಆಗಿಯೂ ಬಳಸುತ್ತಾರೆ. ಮೊಗ್ಗುಗಳಿಂದ ವೀರ್ಯವರ್ಧಕ ಔಷಧಿಗಳನ್ನು ತಯಾರಿಸಲಾಗುವುದು. 
(ಕೆ.ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ